ನೀನೊಂದು ದೀಪವಾಗಬೇಕಿತ್ತು

ಕೃಪೆ: www.likepainting.com
ನಿನ್ನೆಯಷ್ಟೇ ನಿನ್ನ ಕೂಗಿ ಕರೆದಿದ್ದೆ, ಇಂದು ಹಾಜರಾತಿಯಲಿ ನಿನ್ನ ಹೆಸರನ್ನು ಮತ್ತೆ ಕೂಗುತ್ತಿದ್ದೇನೆ. ಮೊದಲ ಬೆಂಚಿನ ಮೂಲೆ ಹುಡುಗಿ ನೀ ಇಂದು ಇಲ್ಲವೆಂಬ ಸತ್ಯ ಒಪ್ಪುವುದು ಕಷ್ಟ. ನೀ ಕೂತ ಜಾಗದಲಿ ನಿನ್ನ ಗೆಳತಿ ಕೂತರೂ ಖಾಲಿ ಖಾಲಿ ಗೊತ್ತಾ? ಪುಸ್ತಕ ಕೊಳ್ಳುವ ನಿನ್ನ ಉತ್ಸಾಹ, ಕನಸುಗಳು, ಆಸಕ್ತಿಯಿಂದ ನಿಜವಾದ ವಿದ್ಯಾರ್ಥಿ ಎನಿಸಿದ್ದೆ ನೀನು. ನಿನ್ನೆ ನೀ ಕೇಳಿದ ಪುಸ್ತಕ ಇಂದು ನಿನ್ನ ಕೈ ಸೇರುವ ಮುನ್ನವೇ ಬೇರೆ ಲೋಕಕ್ಕೆ ನಡೆದದ್ದು ಸರಿಯೇ? ನಿನಗೆ ಅಮ್ಮ ಇದ್ದಿದ್ದರೆ ಹೀಗಾಗುತ್ತಿರಲಿಲ್ಲವೇನೋ? ಸಾವಿನ ಕ್ಷಣದ ತಲ್ಲಣಗಳು ಅವಳ ಬೆಚ್ಚನೆಯ ಮಡಿಲಲ್ಲಿ ಕರಗುತ್ತಿದ್ದವೇನೋ? ಎಲ್ಲ ಅಪ್ಪಂದಿರೂ ಅಮ್ಮನಾಗುವುದಿಲ್ಲ-ಅಪ್ಪನೂ ಆಗದ ಹೊರತು. ನೀ ವಿದ್ಯಾರ್ಥಿಯಷ್ಟೇ ಆಗಿರಲಿಲ್ಲ. ಜಾತಿಯ ಕಂದಕ ದಾಟಿ ವಿವಾಹವಾದ ನಿನ್ನ ದಿಟ್ಟತನಕ್ಕೆ ಎಲ್ಲ ಗೆಳೆಯರೂ ಕಣ್ಣರಳಿಸಿದ್ದರು. ಕ್ಯಾಮೆರಾ, ಪುಸ್ತಕಗಳು ನಿನ್ನ ಮನೆ-ಮನ ತುಂಬಿದ್ದವು. ಪ್ರೀತಿಯ ಗಂಡ, ಮುದ್ದಿನ ಮಗು, ಅಸೂಯೆ ಹುಟ್ಟಿಸುವ ಸಂಸಾರ. ಆದರೆ ಕತೆ ಮುಗಿಯಿತೇಕೆ ಮಧ್ಯೆಯೇ?

ಇಂದು ನೀ ಕಾಲೇಜಿಗೆ ಬರಬೇಕಿತ್ತು ಮಾರಾಯ್ತಿ, ಕಾವ್ಯ ಓದುತ್ತಾ ನೋವ ಮರೆಯಬಹುದಿತ್ತು. ಒಂದಷ್ಟು ಹರಟಬಹುದಿತ್ತು. ನೀನೊಂದು ದೀಪವಾಗಬೇಕಿತ್ತು ಹುಡುಗಿ. ಎಂದಿನಂತೆ ಮುಗುಳ್ನಗೆ ಹೊತ್ತು ಮನೆಗೆ ಮರಳಬೇಕಿತ್ತು. ಆತ್ಮಹತ್ಯೆ ಹೇಡಿತನ ಎಂದು ಬೋಧಿಸುವ ನನಗೆ ಕೊನೆಗೂ ನೀ ಏನೆಂದೇ ತಿಳಿಯದಾದೆ. ಈ ಸಮಾಜ, ಶಿಕ್ಷಣ ವ್ಯವಸ್ಥೆ, ಕಡೆಗೆ ಪಾಠ ಹೇಳುವ ನನ್ನ ಮೇಲೂ ಅರ್ಥವಾಗದ ಬೇಸರಕಣೇ ಗೆಳತಿ, ಹೇಳಿಕೊಳ್ಳಲಾರದ ನೋವು ಅಂಥದ್ದೇನಿತ್ತು?

ಸಾಹಿತ್ಯವನ್ನು ಓದಬೇಕು ಒಂದಷ್ಟು ಖುಷಿಗೆ, ಸಾಂತ್ವನಕ್ಕೆ, ನಮ್ಮಷ್ಟಕ್ಕೆ ನಾವು ಗಟ್ಟಿಗೊಳ್ಳಲು... ಹೀಗೇ ಏನೇನೋ ಅಂದುಕೊಳ್ಳುತ್ತೇನೆ ನಾನು. ಆದರೆ ನೀ ನನ್ನೆಲ್ಲ ನಂಬಿಕೆಗಳಾಚೆ ಹೊರಟುಬಿಟ್ಟೆ. ಕಾಲ ನಿಲ್ಲುವುದಿಲ್ಲ; ಬದುಕು, ನೋವು, ಸಂಕಟಗಳೂ ಕೂಡ. ಇಂದಿನ ನೋವು, ಸಂಕಟಗಳ ನುಂಗದ ಹೊರತು ನಮ್ಮ ನಾಳೆಗಳು ಅರಳುವುದಿಲ್ಲವಲ್ಲ? ಬದುಕಬೇಕು ಇಲ್ಲಿ ಹಣತೆ ಹಚ್ಚುವವರು ಮತ್ತು ಹಣತೆಯಾಗುವವರು, ಬೆಳಗಬೇಕು ಎಲ್ಲರೂ ಈ ಭುವಿಯನ್ನು.

ಬೆಳಕೆಂದರೆ...

ಬೆಳಕೆಂದರೆ?

ಹೀಗೆ ಪ್ರಶ್ನಿಸಿಕೊಳ್ಳುವ ಆಸೆ ಒಮ್ಮೊಮ್ಮೆ. ಹಾಗೆ ಪ್ರಶ್ನಿಸಿಕೊಂಡಾಗೆಲ್ಲ ಸಿಕ್ಕ ಉತ್ತರ ಹಲವು.
ನನ್ನೊಳಗಿನ ಅರಿವು, ನನ್ನೊಳಗಿನ ಕನಸು, ನಾಳಿನ ಭರವಸೆ, ಎಚ್ಚರದ ಕ್ಷಣಗಳು, ಪಕ್ವತೆಯ ಹದವ ಕೊಡುವ ಪರಿ, ಕ್ಷಣ ಕ್ಷಣಕ್ಕೂ ಅರಳುವ ಜೀವದುಸಿರು, ನಿನ್ನ ಮುಖ ಕಾಣುವ ಗಳಿಗೆ, ಕನ್ನಡಿಯಲಿ ನನ್ನ ನಾನು ಕಂಡುಕೊಳ್ಳುವ ಹೊತ್ತು, ಭಯದ ಕರಿನೆರಳಿಲ್ಲದ ಧೃತಿಯ ದಿನಗಳು, ನಾನಾಗಿ ರೂಪುಗೊಳ್ಳುವ ಕಾಯಕದ ದಿವಸಗಳು, ಮರೆತ ನೆನಪುಗಳ ಹೆಕ್ಕಿ ತೆಗೆವ ಕಾಲ, ಬದುಕಿನ ಸಾಧ್ಯತೆಗಳ ಪಯಣ, ಭರವಸೆಯ ಮೌನ... ಉಫ್... ಬೆಳಕೆಂದರೆ ಇನ್ನೂ ಏನೇನೋ.
                           ***
ಒಂದು ಮುಂಜಾವು ಆತ ಕನಸುಗಳೊಟ್ಟಿಗೆ ಎದ್ದ. ಕಳೆದ ಕತ್ತಲೆಗೆ ಒಂದು ಹೊಸ ಭಾಷ್ಯ ಬರೆಯುವಾಸೆ ಅವನಿಗೆ. ಅಜ್ಜ, ಅಪ್ಪ, ಅವನ ಪರಂಪರೆ, ಮರ, ಗದ್ದೆ, ಗುಡಿಸಲು... ಎಲ್ಲೆಡೆ ಅಕ್ಷರಗಳಿಗಾಗಿ ಅರಸಿದ. ಹುಡುಕಾಟದಲ್ಲಿ ಕಂಡ ಬೆಳಕು; ಮನೆಯಾಚೆ ಜಗತ್ತಿಗೆ ತೆರೆದುಕೊಳ್ಳುವ ಬಯಕೆ. ಬಡತನದ ಬೇಗೆಯಲ್ಲೂ, ಹರುಕು ಬಟ್ಟೆಗಳಲ್ಲೂ ಅಕ್ಷರ ಕಂಡಾತ ಜ್ಞಾನದ ಬೆನ್ನು ಹತ್ತಿದ, ತನ್ನ ಅರಿವಿನ ಹಾದಿ ಹಿಡಿದ.
                                                                   ***
ಮನೆಯ ಕಸ, ಮುಸರೆ ಪಾತ್ರೆಗಳಲ್ಲಿ ಮುಖ ನೋಡಿಕೊಂಡಳು ಹುಡುಗಿ, ಅವಳ ಕಂಬನಿಯಲ್ಲೊಂದು ಕಾಮನಬಿಲ್ಲಿತ್ತು. ಅವಳಿಗೂ ಹೊಸ್ತಿಲು ದಾಟುವಾಸೆ. ತನ್ನೊಳಗಿನ ಕನಸುಗಳಿಗೆ ರೆಕ್ಕೆ ಪುಕ್ಕ ಕಟ್ಟಿ ಗಾಳಿಪಟ ಹಾರಿಸುವಾಸೆ ಎತ್ತರೆತ್ತರಕ್ಕೆ. ಕತ್ತಲ ಕೋಣೆಯಲಿ ಅಕ್ಷರಗಳ ಹಿಡಿದು ಹೊಸ್ತಿಲು ದಾಟುತ್ತಾಳೆ. ತನ್ನ ತಾನರಿಯುವ ಆಸೆಯಲ್ಲಿ, ಜಗದೊಟ್ಟಿಗಿನ ಒಡನಾಟದಲ್ಲಿ ಹೊಸ ಕನಸುಗಳ ಜೊತೆಗೆ.